ಅಯನಾಂಶ

	ಭೂಮ್ಯಕ್ಷದ ದಿಕ್ಕು ಕ್ರಮೇಣ ಬದಲಾಗುವುದರಿಂದ ಉತ್ಪನ್ನವಾಗುವ ಪರಿಣಾಮ (ಪ್ರಿಸೆಷನ್ ಆಫ್ ದಿ ಈಕ್ವಿನಾಕ್ಸಸ್). ತನ್ನ ಸುತ್ತಲೂ ಆವರ್ತಿಸುತ್ತ, ಸೂರ್ಯನ ಸುತ್ತಲೂ ಪರಿಭ್ರಮಿಸುತ್ತಿರುವ ಭೂಮಿಯ ಅಕ್ಷದ ದಿಕ್ಕುಗಳು ಸ್ಥೂಲಗಣನೆಗೆ ಸಮಾಂತರವಾಗಿರುವುವು. 

ಚಿತ್ರ-1

ಅಯನಾಂಶದಿಂದ ಭೂಮ್ಯಕ್ಷರೇಖಿಸುವ ದೊಡ್ಡ ಲಂಬವೃತ್ತೀಯ ಶಂಕು ಮತ್ತು ಅಕ್ಷಕಂಪದಿಂದ ರೇಖಿಸುವ ಚಿಕ್ಕಶಂಕು
ಆದರೆ ಸಾವಿರಾರು ವರ್ಷಗಳ ಅವಧಿಯಲ್ಲಿ ಪರಿಶೀಲಿಸಿದಾಗ ಅಕ್ಷ ಒಂದು ಲಂಬವೃತ್ತೀಯ ಶಂಕುವಿನ ಹೊರಮೈಯನ್ನು ರೇಖಿಸುವುದು ಎಂದು ತಿಳಿದಿದೆ. ಈ ಶಂಕುವಿನ ಶೃಂಗಾರ್ಧಕೋನ 231/20. ಒಂದು ಪೂರ್ಣ ಪರಿಭ್ರಮಣೆಯ ಅವಧಿ ಸುಮಾರು (26,000) ವರ್ಷಗಳು. ಇದರ ಪ್ರತ್ಯಕ್ಷ ಪರಿಣಾಮ ಧ್ರುವನಕ್ಷತ್ರದ ಸ್ಥಾನಪಲ್ಲಟದಲ್ಲಿದೆ - ಭೂಮ್ಯಕ್ಷದ ಉತ್ತರ ಕೊನೆ ಸೂಚಿಸುವ ಆಕಾಶಬಿಂದುವಿನಲ್ಲಿರುವ ನಕ್ಷತ್ರ ಅಚಲ ಧ್ರುವನಕ್ಷತ್ರವೆನ್ನಿಸುವುದು. ಇಂದು ಲಘುಸಪ್ತರ್ಷಿ ಪ್ರಥಮ ((-Uಡಿsಚಿe ಒiಟಿoಡಿis) ಧ್ರುವನಕ್ಷತ್ರ; ಇನ್ನು 13,000 ವರ್ಷಗಳಲ್ಲಿ ಅಭಿಜಿನ್ನಕ್ಷತ್ರ ಧ್ರುವನಕ್ಷತ್ರವಾಗುತ್ತದೆ. ಖಗೋಳೀಯವಾಗಿ ಅಯನಾಂಶದಿಂದ ಸ್ಥಿರನಕ್ಷತ್ರಗಳ ನಿರ್ದೇಶಕಗಳಲ್ಲಿ ವ್ಯತ್ಯಾಸವುಂಟಾಗುತ್ತದೆ.

	ಗ್ರೀಕ್ ಖಗೋಳಶಾಸ್ತ್ರಪ್ರವೀಣ ಹಿಪಾರ್ಕಸ್ (ಕ್ರಿ.ಪೂ. 190-120) ಸುಮಾರು 1,000ಕ್ಕೂ ಹೆಚ್ಚು ನಕ್ಷತ್ರಗಳ ಸ್ಥಾನಗಳನ್ನು ಕೆಲವು ವರ್ಷ ಪರಿಶೀಲಿಸಿ ಎಲ್ಲ ನಕ್ಷತ್ರಗಳಿಗೂ ಖಗೋಳೀಯ ರೇಖಾಂಶದಲ್ಲಿ (ಸೆಲೆಸ್ಟಿಯಲ್ ಲಾಂಜಿಟ್ಯೂಡ್) ಒಂದೇ ಸಮನಾದ ವಿಸ್ತರಣೆಯಿದೆಯೆಂದು ಖಗೋಳೀಯ ಅಕ್ಷಾಂಶದಲ್ಲಿ (ಸೆಲೆಸ್ಟಿಯಲ್ ಲ್ಯಾಟಿಟ್ಯೂಡ್) ಸ್ವಲ್ಪವೂ ಬದಲಾವಣೆ ಇಲ್ಲವೆಂದೂ ಪ್ರಸಿದ್ಧಪಡಿಸಿದ. ಈ ಬದಲಾವಣೆಗಳನ್ನು ಎರಡು ರೀತಿಯಾಗಿ ವಿವರಿಸಬಹುದು : (1) ನಕ್ಷತ್ರಗಳು ತಾವಾಗಿಯೇ ಹೊಸ ಸ್ಥಾನಗಳಿಗೆ ಚಲಿಸಿರಬಹುದು; ಅಥವಾ (2) ಆಧಾರಬಿಂದು ಇಲ್ಲವೆ ಸಮತಲವೇ ಚಲಿಸುತ್ತಿರಬಹುದು. ಅಸಂಖ್ಯಾತ ನಕ್ಷತ್ರಗಳಿಗೆಲ್ಲ ಏಕಪ್ರಕಾರಚಲನೆ ಇದೆಯೆಂಬುದು ಅಸಾಧುವೆಂದು ಹಿಪಾರ್ಕಸ್ ತರ್ಕಿಸಿದ. ಆದ್ದರಿಂದ ವಿಷುವದ್ವøತ್ತ ಕ್ರಾಂತಿವೃತ್ತದ ಮೇಲೆ ಅಪ್ರದಕ್ಷಿಣೆ ದಿಕ್ಕಿನಲ್ಲಿ ಚಲಿಸುತ್ತಿದೆ - ಅಂದರೆ ವಿಷುವದ್ಬಿಂದುಗಳು ಕ್ರಾಂತಿವೃತ್ತದ ಮೇಲೆ ಈ ಪ್ರಕಾರ ಜಾರುತ್ತಿವೆ-ಎಂದು ವಾದಿಸಿದ. ಈ ಅದ್ಭುತವಿಚಾರಕ್ಕೆ ನ್ಯೂಟನ್ ಚಲನಶಾಸ್ತ್ರದ ನಿಯಮಗಳಿಂದ ಸಮರ್ಥನೆ ಕೊಟ್ಟಿದ್ದಾನೆ. ಅವನು ಭೂಮಿಯನ್ನು ಬಹುವೇಗವಾಗಿ ಸುತ್ತುತ್ತಿರುವ ಬುಗುರಿಗೆ ಹೋಲಿಸಿ ಇಲ್ಲಿ ಅಕ್ಷ ಹೇಗೆ ಒಂದು ಲಂಬವೃತ್ತೀಯ ಶಂಕುವನ್ನು ರೇಖಿಸುವುದು ಎಂದು ತೋರಿಸಿದ್ದಾನೆ. ಸೂರ್ಯ ಮತ್ತು ಚಂದ್ರ (ಮೊದಲನೆಯದು ಗಾತ್ರಬಲದಿಂದ, ಎರಡನೆಯದು ಭೂಮಿಗೆ ಸಮೀಪದ ಉಪಗ್ರಹವಾಗಿರುವುದರಿಂದ) ಭೂಮಿಯ ಅಕ್ಷಚಲನೆಯ ಮೇಲೆ ವಿಶೇಷ ಪ್ರಭಾವ ಬೀರುತ್ತವೆ. ಇದೇ ರೀತಿ ಗ್ರಹಗಳ ದುರ್ಬಲ ಆದರೂ ಸ್ಪಷ್ಟಪ್ರಭಾವ ಇದ್ದೇ ಇದೆ. ಕಾರಣ ಯಾವುದೇ ಇರಲಿ, ಪರಿಣಾಮದಲ್ಲಿ ವಿಷುವದ್ಬಿಂದುಗಳು ಕ್ರಾಂತಿವೃತ್ತದ ಮೇಲೆ ಚಲಿಸುತ್ತವೆ. ಇದೇ ಅಯನಾಂಶ. ಇದರಿಂದ ನಕ್ಷತ್ರಗಳ ಖಗೋಳೀಯ ರೇಖಾಂಶಗಳಲ್ಲಿ ಏಕಪ್ರಕಾರ ವ್ಯತ್ಯಾಸ ಉಂಟಾಗುತ್ತದೆ. ಸೂರ್ಯನಿಂದ ಮಾತ್ರ ಉಂಟಾದ ವಿಷುವದ್ಬಿಂದು ಚಲನೆಯನ್ನು ಸೌರ ಅಯನಾಂಶವೆಂದೂ ಸೂರ್ಯ ಚಂದ್ರರಿಂದ ಉಂಟಾದ ಚಲನೆಯನ್ನು ಚಾಂದ್ರಸೌರ ಅಯನಾಂಶವೆಂದೂ ಕರೆಯುತ್ತೇವೆ. ಇದೇ ರೀತಿ ಗ್ರಹ ಅಯನಾಂಶ.

	ಬ್ರಹ್ಮಗುಪ್ತ (628) ಮತ್ತು ವರಾಹಮಿಹಿರ (ಮರಣ 587) ಅಯನಾಂಶವನ್ನು ಸ್ಪಷ್ಟವಾಗಿ ಅಥವಾ ನೇರವಾಗಿ ಹೇಳದಿದ್ದರೂ ಹಿಂದೂ ಖಗೋಳಶಾಸ್ತ್ರದಲ್ಲಿ ಅಯನಾಂಶ ಅಥವಾ ವಿಷುವತ್ಸ್ಥಾನಪಲ್ಲಟದ ಖಚಿತ ಉಲ್ಲೇಖ ಕ್ರಿ.ಶ. 932ರಲ್ಲಿ ಮಂಜುಳನ ಬರೆವಣಿಗೆಯಲ್ಲಿ ಮೊದಲಸಲ ಕಂಡುಬರುತ್ತದೆ. ಅಯನಾಂಶವನ್ನು ಕಂಡುಹಿಡಿಯಲು ಅಲ್ಲಿ ಎರಡು ನಿಯಮಗಳನ್ನು ವಿವರಿಸಿದೆ. ಆರ್ಯಸಿದ್ಧಾಂತರೀತಿಯಲ್ಲಿ ಕಲಿಯುಗ 3624ನ್ನು (ಕ್ರಿ.ಶ.522) ಆಧಾರವರ್ಷವಾಗಿ ತೆಗೆದುಕೊಂಡಿದೆ. ಆಗ ಸಾಯನಸೌರಮಾನ (ಟ್ರಾಪಿಕಲ್) ಮತ್ತು ನಕ್ಷತ್ರಮಾನ (ಸೈಡೀರಿಯಲ್) ಮೇಷ ಸಂಕ್ರಮಣಗಳು ಒಟ್ಟಾಗಿ ಸೇರಿದ್ದವೆಂದು ಅಂದಾಜು ಮಾಡಲಾಗಿತ್ತು; ಆದರೆ ಸೂರ್ಯಸಿದ್ಧಾಂತ ಕಲಿಯುಗ 3601ನ್ನು (ಕ್ರಿ.ಶ.499) ಆಧಾರವರ್ಷವಾಗಿ ತೆಗೆದುಕೊಂಡಿದೆ. ಆಧಾರವರ್ಷ ಮತ್ತು ಯಾವುದೇ ಕೊಟ್ಟ ವರ್ಷಗಳ ಮಧ್ಯೆ ಇರುವ ವರ್ಷಗಳನ್ನು ಆರ್ಯಸಿದ್ಧಾಂತದ ರೀತಿ 1/60 ರಿಂದ ಮತ್ತು ಸೂರ್ಯಸಿದ್ಧಾಂತದ ರೀತಿ 3/200 ರಿಂದ ಗುಣಿಸಬೇಕಾಗುತ್ತದೆ. ಮೊದಲನೆಯದು ವಾರ್ಷಿಕ ಅಯನಾಂಶದ ಬೆಲೆಯನ್ನು 60", ಎರಡನೆಯದು 54" ಎಂದು ಕೊಡುತ್ತದೆ. ಈ ಎರಡು ಬೆಲೆಗಳನ್ನು ಇಂದಿನ ಖಚಿತವಾದ ಉಪಕರಣಗಳ ಸಹಾಯದಿಂದ ಕಂಡು ಹಿಡಿದ ಆಧುನಿಕ ಬೆಲೆಗೆ ಹೋಲಿಸಿದರೆ ಸ್ವಲ್ಪ ವ್ಯತ್ಯಾಸ ಕಂಡುಬರುತ್ತದೆ. ಇದರ ಬೆಲೆ 240 ವರ್ಷಗಳಿಗೆ 1 ಗಂಟೆಯೆಂದು ಎಸ್.ಬಿ. ದೀಕ್ಷಿತರು ಅಂದಾಜು ಮಾಡಿ ತಿಳಿಸಿದ್ದಾರೆ.			     
 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ